Tuesday, April 12, 2011

ಹುಲಿ ಸಂಖ್ಯೆಗಳು: ಇದು ಬರಿ ಹುಸಿ ಕಾಣ!

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹುಲಿ ಸಂಖ್ಯೆಗಳನ್ನು ಕುರಿತ ವೈಜ್ಞಾನಿಕ ವಿಶ್ಲೇಷಣೆ: ಇದೀಗ ಕೇಂದ್ರ ಸರ್ಕಾರ ಹುಲಿ ಸಂಖ್ಯೆಗಳನ್ನು ಹೊರಗೆಡಹಿದೆ. ಇದರ ಪ್ರಕಾರ ಸುಂದರ ಬನವೂ ಸೇರಿದಂತೆ ಭಾರತದಲ್ಲಿ 1706 ಹುಲಿಗಳಿವೆ. ಅಂದರೆ, ಹಿಂದಿನ ವರದಿಗಿಂತ ಸುಮಾರು ಮುನ್ನೂರಕ್ಕೂ ಹೆಚ್ಚು ಹುಲಿಗಳು ಈಗಿನ ಗಣತಿಯಲ್ಲಿ ಕಂಡು ಬಂದಿವೆ. ಇದು ಹಿಂದೆ ನಡೆದ ಹುಲಿ ಸಂಖ್ಯೆಗಳ ಕುಸಿತಕ್ಕೆ ಸರಿದೂಗಿಸುತ್ತದೆ ಎಂದೂ ಹೇಳಲಾಗುತ್ತಿದೆ. ಇದನ್ನು ಒಪ್ಪಿ ಸಂತೋಷದಿಂದ ಕುಣಿದಾಡುವ ಮುನ್ನು ಹಲವಾರು ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆಗ ಇದರ ಬಣ್ಣ ಬಯಲಾಗುತ್ತದೆ. ಬಹಳ ಮುಖ್ಯವಾಗಿ, ಹುಲಿಗಳ (ಅಥವಾ ಯಾವುದೇ ಪ್ರಾಣಿಗಳ) ಗಣತಿ ಎಂದರೆ, ಮನುಷ್ಯರನ್ನು ಗಣತಿ ಮಾಡುವಂತೆ, ಪ್ರತಿಯೊಂದು ಪ್ರಾಣಿಯನ್ನು ಎಣಿಸಲು ಸಾಧ್ಯವಿಲ್ಲ. ಇದಕ್ಕಾಗಿ ವನ್ಯಜೀವಿ ತಜ್ಞರು ವಿವಿಧ ಪ್ರಾಣಿಗಳ ಗಣತಿಗೆ ಬೇರೆ ಬೇರೆ ಗಣತಿ ವಿಧಾನವನ್ನು ಅನುಸರಿಸುತ್ತಾರೆ. ಹುಲಿಗಳ ಗಣತಿಗೆ ಕ್ಯಾಮೆರಾ ಟ್ರಾಪ್ ಹಾಗೂ ಇತ್ತೀಚಿನ ಆವಿಷ್ಕಾರವಾದ ಡಿಎನ್ಎ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಸುಮಾರು ದಶಕಗಳ ಕಾಲ ಸರ್ಕಾರ ಹುಲಿಗಳ ಹೆಜ್ಜೆಗುರುತುಗಳ ಅವೈಜ್ಞಾನಿಕ ಗಣತಿ ವಿಧಾನವನ್ನೇ ಅನುಸರಿಸುತ್ತಿತ್ತು. ಇದು ಅವೈಜ್ಞಾನಿಕ ಎಂದು ತಜ್ಞರು ತೋರಿಸಕೊಟ್ಟ ದಶಕಗಳ ನಂತರವೂ ಇದು ಚಾಲ್ತಿಯಲ್ಲಿತ್ತು ಎಂದರೆ, ನಮ್ಮ ಬದ್ಧತೆಯ ಅರಿವಾಗುತ್ತದೆ.